Exhibition and Valedictory programme of Photography
ಮೈಸೂರು : ರುಡ್‌ಸೆಟ್ ಸಂಸ್ಥೆಯು ಎನ್.ಆರ್.ಎಲ್.ಎಂ. ಜಿಲ್ಲಾ ಪಂಚಾಯತ್ ಮೈಸೂರು ಇವರ ಪ್ರಾಯೋಜಕತ್ವದಲ್ಲಿ ಉದ್ಯಮಶೀಲತಾಭಿವೃದ್ಧಿ – ಫೋಟೋಗ್ರಫಿ ಮತ್ತು ವೀಡೀಯೋಗ್ರಫಿ ತರಬೇತಿ ಕಾರ್ಯಕ್ರಮವನ್ನು ೩೦ ದಿನಗಳÀ ಕಾಲಾವಧಿಯವರೆಗೆ ಆಯೋಜಿಸಲಾಗಿದ್ದು, ಈ ತರಬೇತಿ ಕಾರ್ಯಗಾರದ ಸಮಾರೋಪ ಸಮಾರಂಭ ಕಾರ್ಯಕ್ರಮವನ್ನು ದಿನಾಂಕ:೦೫.೦೮.೨೦೨೪ ರ ಸಂಜೆ ಸಂಸ್ಥೆಯ ಆವರಣದಲ್ಲಿ ಆಯೋಜಿಸಲಾಗಿತ್ತು, ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀಯುತ ರವಿಶಂಕರ್, ವನ್ಯಜೀವಿ ಛಾಯಾಗ್ರಾಹಕರು, ಮೈಸೂರು ಇವರು ಭಾಗವಹಿಸಿದ್ದರು.
೩೦ ದಿನಗಳ ಕಾಲ ತರಬೇತಿಯಲ್ಲಿ ಅಭ್ಯರ್ಥಿಗಳು ಸೆರೆಹಿಡಿದ ಛಾಯಾಚಿತ್ರಗಳ ವಸ್ತುಪ್ರದರ್ಶನವನ್ನು ಶ್ರೀಯುತ ರವಿಶಂಕರ್ ರವರು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಶ್ರೀಯುತ ರವಿಶಂಕರ್, ವನ್ಯಜೀವಿ ಛಾಯಾಗ್ರಾಹಕರು, ಮೈಸೂರು ಇವರು ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿದರು ಹಾಗೂ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ಛಾಯಾಗ್ರಹಣವು ಇಂದಿನ ಯುವಜನತೆಯ ನೆಚ್ಚಿನ ಕ್ಷೇತ್ರವಾಗಿದೆ, ಇತ್ತೀಚಿನ ದಿನಗಳಲ್ಲಿ ಯುವಜನತೆ ತಮ್ಮ ತಮ್ಮ ಸ್ಮಾರ್ಟ್ ಫೋನ್‌ಗಳಲ್ಲಿ ಫೋಟೋಗಳನ್ನು ಕ್ಲಿಕ್ಕಿಸುತ್ತಿದ್ದಾರೆ, ಹೆಚ್ಚಿನ ಜನರ ಫ್ಯಾಷನ್ ಆಗಿ ಫೋಟೋಗ್ರಫಿ ಮಾರ್ಪಟ್ಟಿದೆ. ಒಂದು ಉತ್ತಮ ಛಾಯಾಚಿತ್ರ ಸಾವಿರ ಪದಗಳಿಗೆ ಸಮ ಎಂಬ ಮಾತಿನಂತೆ ಛಾಯಾಗ್ರಹಣಕ್ಕೆ ಅಧ್ಬುತ ಸಾಮರ್ಥ್ಯವಿದೆ, ಪದಗಳಲ್ಲಿ ವರ್ಣಿಸಲು ಅಸಾಧ್ಯವಾದದ್ದನ್ನು ಅದೇಷ್ಟೋ ಮಾತುಗಳನ್ನು ಒಂದು ಉತ್ತಮ ಛಾಯಾಚಿತ್ರ ಬಿಡಿಸುತ್ತದೆ. ಛಾಯಾಗ್ರಹಣ ಕ್ಷೇತ್ರವು ವಿಪುಲ ವೃತ್ತಿಪರ ಅವಕಾಶಗಳನ್ನು ಸೃಷ್ಟಿಸುತ್ತಿದೆ, ಇದು ವಾಣಿಜ್ಯ, ಭಾವಚಿತ್ರ, ಮದುವೆ, ವನ್ಯಜೀವಿ, ಫ್ಯಾಷನ್ ಮತ್ತು ಲ್ಯಾಂಡ್ ಸ್ಕೇಪ್ ಛಾಯಾಗ್ರಹಣದಂತಹ ವಿವಿಧ ವೃತ್ತಿಪರ ಮಾರ್ಗಗಳನ್ನು ನೀಡುತ್ತದೆ. ಉತ್ಸಾಹಿಗಳಿಗೆ ವೃತ್ತಿಭವಿಷ್ಯವನ್ನು ಸೃಷ್ಟಿಸುತ್ತದೆ. ಈ ಕ್ಷೇತ್ರಗಳಲ್ಲಿ ಮುಂದುವರೆದು ಬದುಕು ಕಟ್ಟಿಕೊಳ್ಳಬೆಕೆನ್ನುವವರು ಛಾಯಾಗ್ರಹಣದ ಮೂಲಭೂತ ಅಂಶಗಳನ್ನು ಅರ್ಥಮಾಡಿಕೊಳ್ಳಿ, ಕ್ಯಾಮೆರಾ ನಿರ್ವಹಣೆ, ಎಕ್ಸ್ಫೋಸರ್ ಸೆಟ್ಟಿಂಗ್‌ಗಳು, ಸಂಯೋಜನೆ, ಬೆಳಕು ಮತ್ತು ನಂತರದ ಪ್ರಕ್ರಿಯೆ ಸೇರಿದಂತೆ ಫೋಟೋಗ್ರಫಿಯ ಮೂಲಭೂತ ಅಂಶಗಳನ್ನು ತಾಳ್ಮೆಯಿಂದ ಕಲಿಯಿರಿ, ಸ್ಥಿರವಾಗಿ ಅಭ್ಯಾಸ ಮಾಡಿ ಎಂದು ಶಿಬಿರಾರ್ಥಿಗಳಿಗೆ ಕಿವಿ ಮಾತು ಹೇಳಿದರು. ಪ್ರತಿ ಸನ್ನಿವೇಶದಲ್ಲಿ ನಮ್ಮನ್ನು ನಾವು ಸಾಣೇ ಹಿಡಿಯುವ ಕೆಲಸವನ್ನು ಮಾಡಿಕೊಳ್ಳುತ್ತಾ ಕೌಶಲ್ಯದಲ್ಲಿ ಚುರುಕುತನವನ್ನು ರೂಢಿಸಿಕೊಳ್ಳಬೇಕು ಎಂದು ತಮ್ಮ ವೃತ್ತಿಬದುಕಿನ ಏರಿತಗಳೊಂದಿಗೆ ಶಿಬಿರಾರ್ಥಿಗಳನ್ನು ಹುರಿದುಂಬಿಸಿದರು. ಕೆಲಸ ಮಾಡಲೇಬೇಕೆಂದು ಬಂದ ಮನಸುಗಳಿಗೆ ಸಕಾರಾತ್ಮಕ ಭವಿಷ್ಯವಿದೆ, ಯೋಚನೆ ಮತ್ತು ಯೋಜನೆಗಳನ್ನು ಸರಿಯಾಗಿ ಅನುಷ್ಠಾನಗೊಳಿಸಿಕೊಳ್ಳಿರಿ, ತಾಂತ್ರಿಕ ಅನುಭವವನ್ನು ಉನ್ನತಪಡಿಸಿಕೊಂಡು ಬದ್ದತೆಯಿಂದ ಕೆಲಸ ಮಾಡಿ ಯಶಸ್ಸು ಸಾಧಿಸಿ ಎಂದು ಆಶಿಸುತ್ತಾ ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.
ಶ್ರೀ ಗಿರಿಮಂಜು, ಛಾಯಾಗ್ರಾಹಕ ತರಬೇತುದಾರರು, ಮೈಸೂರು ಇವರು ಪ್ರಸ್ತಾವಿಕವಾಗಿ ಮಾತನಾಡುತ್ತಾ ಕೌಶಲ್ಯಭರಿತರಿಗೆ ಬೇಡಿಕೆ ಇದೆ, ಛಾಯಾಗ್ರಾಹಕರು ಅಣುವಿನಿಂದ ಹಿಡಿದು ಅನಂತದವರೆಗೆ ಸೆರೆಹಿಡಿಯಬಹುದು. ಇತಿಹಾಸದ ಆಗುಹೋಗುಗಳನ್ನು ಮುಂದಿನ ಸಮಾಜಕ್ಕೆ ತಿಳಿಸುವ ಮಹತ್ವದ ಜವಾಬ್ದಾರಿ ಛಾಯಾಗ್ರಾಹಕರ ಮೇಲಿದೆ ಎಂದು ಶಿಬಿರಾರ್ಥಿಗಳಿಗೆ ತಿಳಿ ಹೇಳಿದರು.
ಕಾರ್ಯಕ್ರಮದಲ್ಲಿ ಶ್ರೀ ನಾಗರಾಜು, ಛಾಯಾಗ್ರಾಹಕ ತರಬೇತುದಾರರು, ಹಾವೇರಿ ಇವರುಗಳು ಉಪಸ್ಥಿತರಿದ್ದರು.
ಶ್ರೀಮತಿ ಸರಿತಾ ಕೆ.ಎಸ್. ನಿರ್ದೇಶಕರು, ರುಡ್‌ಸೆಟ್ ಸಂಸ್ಥೆ, ಮೈಸೂರು ಇವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಬದುಕಿನಲ್ಲಿ ಯಶಸ್ಸನ್ನು ಸಾಧಿಸಲು ಪ್ರೇರಣೆ ಮತ್ತು ಪೂರಕವಾದ ತಿಳುವಳಿಕೆ ದೊರೆಯಲು ಇಂತಹ ತರಬೇತಿ ಕಾರ್ಯಗಾರಗಳು ನೆರವಾಗುತ್ತವೆ, ಆದ್ದರಿಂದ ತರಬೇತಿಯಲ್ಲಿ ಹೊಸದನ್ನು ಕಲಿಯಲು ಆಸಕ್ತಿವಹಿಸಿ ಎಂದು ಗ್ರಾಹಕರ ಜೊತೆ ಉತ್ತಮ ಒಡನಾಟ, ಗುಣಮಟ್ಟದ ಸೇವಾ ಮನೋಭಾವ ಮತ್ತು ವಿಶ್ವಾಸವನ್ನು ಮೂಡಿಸುವ ವ್ಯವಹಾರ ಜ್ಞಾನ ಮುಖ್ಯ ಎಂದು ಶಿಬಿರಾರ್ಥಿಗಳಿಗೆ ಸಲಹೆ ನೀಡಿದರು.
ಸಂಸ್ಥೆಯ ಉಪನ್ಯಾಸಕರಾದ ಶ್ರೀ ಆರ್. ಪಾಲ್‌ರಾಜ್ ರವರು ಕಾರ್ಯಕ್ರಮದಲ್ಲಿ ಅತಿಥಿಗಳನ್ನು ಪರಿಚಯಿಸುತ್ತಾ ಎಲ್ಲರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪನ್ಯಾಸಕರಾದ ಶ್ರೀಮತಿ ಲತಾಮಣಿಯವರು ವಂದನಾರ್ಪಣೆ ಮಾಡಿದರು.
ಒಟ್ಟು ಕಾರ್ಯಕ್ರಮದಲ್ಲಿ ೭೦ ಜನ ಶಿಬಿರಾರ್ಥಿಗಳು (ಫೋಟೋಗ್ರಫಿ, ಕಂಪ್ಯೂಟರ್ ಹಾರ್ಡ್ವೇರ್ ತರಬೇತಿ) ಸೇರಿದಂತೆ ಸಂಸ್ಥೆಯ ಸಿಬ್ಬಂದಿ ವರ್ಗದವರು ಹಾಜರಿದ್ದರು.